ರಾಷ್ಟ್ರೀಯ ಯುವಸೇನಾ ದಳ - 
ಉತ್ತಮ ಪೌರರಾಗಲು, ರಕ್ಷಣಾದಳ ಗಳು ಹಾಗೂ ಇತರ ಜೀವನಕ್ಷೇತ್ರಗಳಲ್ಲಿ ರಾಷ್ಟ್ರೀಯ ನಾಯಕರಾಗಲು ಯುವಪೀಳಿಗೆಗೆ ತರಬೇತಿ ನೀಡಲು  ಎನ್‍ಸಿಸಿ ಕಾಯ್ದೆ ಘಿಘಿಘಿI, 1948ನ್ನು ಆಧರಿಸಿ 16ನೆಯ ಜುಲೈ 1948ರಂದು ಭಾರತ ರಕ್ಷಣಾ ಸಚಿವಾಲಯ ಸ್ಥಾಪಿಸಿದ ಸಂಘಟನೆ (ನ್ಯಾಶನಲ್ ಕ್ಯಾಡೆಟ್ ಕೋರ್). 

ಚಾರಿತ್ರಿಕ ಹಿನ್ನೆಲೆ: ಪ್ರಥಮ ಜಾಗತಿಕ ಯುದ್ಧಾವಧಿಯಲ್ಲಿ (1914-18) ಸೈನ್ಯದ ಕೊರತೆಯನ್ನು ನೀಗಲು ಭಾರತ ರಕ್ಷಣಾ ಕಾಯ್ದೆ 1917ನ್ನು ಆಧರಿಸಿ ಸೃಷ್ಟಿಸಿದ್ದ “ವಿಶ್ವವಿದ್ಯಾಲಯ ಸೇನಾದಳ”ವನ್ನು (ಯೂನಿವರ್ಸಿಟಿ ಕೋರ್, ಯುಸಿ) ಭಾರತ ಗಡಿ ಕಾಯ್ದೆ, 1920ನ್ನು ಆಧರಿಸಿ “ವಿಶ್ವವಿದ್ಯಾ ಲಯ ತರಬೇತಿ ಸೇನಾದಳ”ವಾಗಿ (ಯೂನಿವರ್ಸಿಟಿ ಟ್ರೈನಿಂಗ್ ಕೋರ್, ಯುಟಿಸಿ)  ಪರಿವರ್ತಿಸಲಾಯಿತು. 1942ರಲ್ಲಿ ಇದನ್ನು “ವಿಶ್ವವಿದ್ಯಾಲಯ ಅಧಿಕಾರಿಗಳ ತರಬೇತಿ ಸೇನಾದಳ” (ಯೂನಿವರ್ಸಿಟಿ  ಆಫೀಸರ್ಸ್ ಟ್ರೈನಿಂಗ್ ಕೋರ್, ಯುಒಟಿಸಿ) ಎಂದು ಹೆಸರಿಸಲಾಯಿತು. ಎನ್‍ಸಿಸಿ ಸ್ಥಾಪನೆಗೆ ಸ್ಫೂರ್ತಿ ನೀಡಿದ್ದು ಇದು. ಎನ್‍ಸಿಸಿಯಲ್ಲಿ ಎರಡು ವಿಭಾಗ ಗಳಿವೆ: ಹಿರಿಯರದು-ಕಾಲೇಜು ವಿದ್ಯಾರ್ಥಿಗಳ ದಳ; ಕಿರಿಯರದು-ಪ್ರೌಢಶಾಲಾ ವಿದ್ಯಾರ್ಥಿಗಳ ದಳ. ಪ್ರತಿಯೊಂದು ವಿಭಾಗದಲ್ಲಿಯೂ ಎರಡು ಶಾಖೆಗಳಿವೆ: ಹುಡುಗರದು, ಹುಡುಗಿಯರದು. ಇನ್ನು ಸೇನಾಬಲ ಗಳಲ್ಲಿರುವಂತೆ ಮೂರು ಶಾಖೆಗಳೂ ಇವೆ: ಭೂ, ನೌಕಾ, ವಾಯು.

ಎನ್‍ಸಿಸಿಯ ಆರಂಭಿಕ ಗುರಿ ಇದ್ದದ್ದು ಹಿರಿಯರ ವಿಭಾಗದಲ್ಲಿ 32,000 ಮತ್ತು ಕಿರಿಯರದ್ದರಲ್ಲಿ 1,35,000 ಕ್ಯಾಡೆಟುಗಳ (ಸೇನಾ ಶಿಕ್ಷಣ ಪಡೆಯುವ ಯುವಕ ಯುವತಿಯರು) ತರಬೇತಿ. ಪ್ರಸ್ತುತ (2004) ಎನ್‍ಸಿಸಿಯ ಒಟ್ಟು ಸಂಖ್ಯೆ 13,00,000. ಮೇಲ್ನೋಟಕ್ಕೆ ಬಹು ದೊಡ್ಡದಾಗಿ ಕಾಣುವ ಇದು ಒಟ್ಟು ಅರ್ಹ ವಿದ್ಯಾರ್ಥಿಸಂಖ್ಯೆಯ 3.8% ಮಾತ್ರ. 4880 ಕಾಲೇಜುಗಳು ಮತ್ತು 7783 ಶಾಲೆಗಳಲ್ಲಿರುವ 765 ಎನ್‍ಸಿಸಿ ಘಟಕಗಳ ಜಾಲ ಭಾರತಾದ್ಯಂತ ವ್ಯಾಪಿಸಿದೆ.

ಎನ್‍ಸಿಸಿ ಇತಿಹಾಸದ ಪ್ರಮುಖ ಘಟ್ಟಗಳು ಇಂತಿವೆ: ಬಾಲಕಿಯರ ವಿಭಾಗ ಸ್ಥಾಪನೆ 1949, ವಾಯುಸೇನಾ ವಿಭಾಗ ಸೇರ್ಪಡೆ 1950, ನೌಕಾಸೇನಾ ವಿಭಾಗ ಸೇರ್ಪಡೆ 1952, ಎನ್‍ಸಿಸಿ ಪಠ್ಯಕ್ರಮಕ್ಕೆ ಸಮುದಾಯ ವಿಕಾಸ ಸೇರ್ಪಡೆ 1952, ರಾಷ್ಟ್ರೀಯ ಯುವಸೇನಾದಳ ರೈಫಲ್ಸ್ (ಎನ್‍ಸಿಸಿಆರ್) ಸಂಘಟನೆಯ ಸ್ಥಾಪನೆ 1960, ಭಾರತದ ಮೇಲೆ ಚೀನ ಆಕ್ರಮಣದ ಬಳಿಕ ರಾಷ್ಟ್ರದ ರಕ್ಷಣಾವಶ್ಯಕತೆ ಪೂರೈಸಲು ಎನ್‍ಸಿಸಿ ತರಬೇತಿ ಕಡ್ಡಾಯ 1962, ಎನ್‍ಸಿಸಿಯೊಂದಿಗೆ ಎನ್‍ಸಿಸಿಆರ್ ಸೇರ್ಪಡೆ 1964,  ವಿದ್ಯಾರ್ಥಿಗಳ ವಿರೋಧ ಹಾಗೂ ಉಪಕುಲಪತಿಗಳ ಕೋರಿಕೆಯ ಹಿನ್ನೆಲೆಯಲ್ಲಿ ಎನ್‍ಸಿಸಿ ತರಬೇತಿ ಪುನಃ ಐಚ್ಛಿಕವಾದದ್ದು 1968, ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸರದ ಹಿನ್ನೆಲೆಯಲ್ಲಿ ಯುವಜನಾಂಗದ ಆಶೋತ್ತರಗಳಿಗೆ ಸ್ಪಂದಿಸಿ ಎನ್‍ಸಿಸಿಯ ಧ್ಯೇಯಗಳನ್ನು ಪರಿಷ್ಕರಿಸಲು ರಕ್ಷಣಾ ಸಚಿವಾಲಯದ ನಿರ್ಧಾರ ಹಾಗೂ ಪುಣೆ ವಿಶ್ವವಿದ್ಯಾಲಯದ ಉಪಕುಲಪತಿ ಜಿ.ಎಸ್.ಮಹಾಜನ್ ಅಧ್ಯಕ್ಷತೆಯಲ್ಲಿ ಮೌಲ್ಯಮಾಪನ ಸಮಿತಿ ರಚನೆ 1972, ಸಮಿತಿ ವರದಿ ಸಲ್ಲಿಕೆ 1974, ಧ್ಯೇಯೋದ್ದೇಶಗಳ ಹಿನ್ನೆಲೆಯಲ್ಲಿ ಎನ್‍ಸಿಸಿಯ ಕಾರ್ಯವೈಖರಿಯ ಮೌಲ್ಯಮಾಪನಕ್ಕೆ ಸಮಿತಿ ರಚಿಸಲು ಭಾರತ ಸರ್ಕಾರದ ನಿರ್ಧಾರ 1986, ನಿವೃತ್ತ ಲೆ.ಜ. ಎಂ. ಎಲ್. ತಾಪನ್ ಅಧ್ಯಕ್ಷತೆಯ ಸಮಿತಿ ವರದಿ ಸಲ್ಲಿಕೆ 1988.

ಧ್ಯೇಯಗಳು: ಎನ್‍ಸಿಸಿಯನ್ನು ಸ್ಥಾಪಿಸಿದಾಗ (1948) ಅದಕ್ಕೆ ವಿಧಿಸಲಾದ ಧ್ಯೇಯಗಳು: 1. ಶೀಲ, ಸಹವಾಸಿತ್ವ, ನಾಯಕತ್ವ ಮತ್ತು ಸೇವಾದರ್ಶಗಳನ್ನು ಯುವ ಪೀಳಿಗೆಯಲ್ಲಿ  ಅಭಿವರ್ಧಿಸುವುದು; 2. ಸೇನಾಶಿಕ್ಷಣವನ್ನು ಯುವಪೀಳಿಗೆಗೆ ಒದಗಿಸಿ ಅವರಲ್ಲಿ ರಾಷ್ಟ್ರರಕ್ಷಣೆ ಕುರಿತು ಆಸ್ಥೆಯನ್ನು ಸಂವರ್ಧಿಸುವುದು; 3. ರಾಷ್ಟ್ರೀಯ ಗಂಡಾಂತರ ಪರಿಸ್ಥಿತಿಯಲ್ಲಿ ರಕ್ಷಣಾಬಲಗಳನ್ನು ಕ್ಷಿಪ್ರವಾಗಿ ವಿಸ್ತರಿಸಲು ಅನುಕೂಲಿ ಸುವಂತೆ ನುರಿತ ಜನಬಲವನ್ನು ಸಿದ್ಧಪಡಿಸುವುದು.

ತರುವಾಯದ ವರ್ಷಗಳಲ್ಲಿ ಎನ್‍ಸಿಸಿಯ ಧ್ಯೇಯಗಳಲ್ಲಿ ಅಲ್ಪಸ್ವಲ್ಪ ಮಾರ್ಪಾಡುಗಳನ್ನು ತರಲಾಗಿದೆ. ಪ್ರಸ್ತುತ ಧ್ಯೇಯಗಳಿವು (1974ರಿಂದ):  1. ಶೀಲ, ಸಹವಾಸಿತ್ವ (ಕಾಮ್‍ರೆಡ್‍ಶಿಪ್), ಶಿಸ್ತು, ನಾಯಕತ್ವ, ಜಾತ್ಯತೀತ ದೃಷ್ಟಿಕೋನ, ಸಾಹಸ ಪ್ರವೃತ್ತಿ ಮತ್ತು ನಿಸ್ವಾರ್ಥ ಸೇವಾದರ್ಶಗಳನ್ನು ಯುವಪೀಳಿಗೆಯಲ್ಲಿ ವಿಕಸಿಸುವುದು; 2. ದೇಶಸೇವೆಗೆ ಸದಾ ಲಭ್ಯವಿರುವ ಮತ್ತು ಎಲ್ಲ ಜೀವನಕ್ಷೇತ್ರಗಳಲ್ಲಿ ನಾಯಕತ್ವ ಒದಗಿಸಬಲ್ಲ ಸುಸಂಘಟಿತ, ತರಬೇತಿ ಪಡೆದ ಹಾಗೂ ಅಭಿಪ್ರೇರಿತ ಮಾನವ ಸಂಪನ್ಮೂಲ ಸೃಷ್ಟಿಸುವುದು; 3. ಸಶಸ್ತ್ರಪಡೆಗಳಲ್ಲಿ ಜೀವನೋಪಾಯ (ಕರೀಯರ್) ಕಂಡುಕೊಳ್ಳಲು ಯುವಪೀಳಿಗೆಯನ್ನು üಪ್ರೇರೇಪಿಸುವ ಪರಿಸರ ಒದಗಿಸುವುದು.

ಆಡಳಿತ: ವರ್ಷಕ್ಕೊಂದು ಬಾರಿ ಸಭೆ ಸೇರುವ ಕೇಂದ್ರೀಯ ಸಲಹಾ ಸಮಿತಿಯ ಮೇಲುಸ್ತುವಾರಿಯಲ್ಲಿ ಎನ್‍ಸಿಸಿ ತನ್ನ ಕಾರ್ಯ ನಿರ್ವಹಿಸುತ್ತದೆ. ಈ ಸಮಿತಿಯ ಸಂರಚನೆ — ಅಧ್ಯಕ್ಷರು: ರಕ್ಷಣಾಮಂತ್ರಿ; ಪದನಿಮಿತ್ತ ಕಾರ್ಯದರ್ಶಿ: ಡೈರೆಕ್ಟರ್ ಜನರಲ್ ಎನ್‍ಸಿಸಿ; ಪದನಿಮಿತ್ತ ಸದಸ್ಯರು: ಮೂವರು ಸೇನಾ ಮುಖ್ಯಸ್ಥರು, ರಕ್ಷಣಾ ಕಾರ್ಯದರ್ಶಿ, ಶಿಕ್ಷಣ ಕಾರ್ಯದರ್ಶಿ; ಸದಸ್ಯರು: ಇಬ್ಬರು ಲೋಕಸಭಾ ಸದಸ್ಯರು, ಒಬ್ಬ ರಾಜ್ಯಸಭಾ ಸದಸ್ಯ, ಕೇಂದ್ರ ಸರ್ಕಾರ ಸೂಚಿಸುವ ಐವರು ಅಧಿಕಾರೇತರರು.

ರಾಷ್ಟ್ರೀಯ ಯುವ ಸೇನಾ ದಳದ ಪ್ರಧಾನ ಕಾರ್ಯಾಲಯ ದೆಹಲಿಯಲ್ಲಿದೆ.  ಎನ್‍ಸಿಸಿ ಡೈರೆಕ್ಟರ್ ಜನರಲ್ ಎಂಬ ಪದನಾಮವಿರುವ ಲೆಫ್ಟಿನೆಂಟ್ ಜನರಲ್ ದರ್ಜೆಯ ಸೇನಾಧಿಕಾರಿ ಇದರ ಮುಖ್ಯಸ್ಥರು.

ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು 16 ಡೈರೆಕ್ಟೊರೇಟುಗಳಾಗಿ ವಿಭಾಗಿಸಿದೆ. ಪ್ರತಿಯೊಂದು ರಾಜ್ಯದ ಡೈರೆಕ್ಟೊ ರೇಟ್ 2-14 ಗ್ರೂಪ್ ಪ್ರಧಾನ ಕಾರ್ಯಾಲಯಗಳನ್ನು ನಿಯಂತ್ರಿಸುತ್ತದೆ. 657 ಭೂಸೇನಾ, 59 ನೌಕಾಪಡೆಯ ಮತ್ತು 58 ವಾಯುಪಡೆಯ ಘಟಕಗಳ ಜಾಲವನ್ನು 95 ಗ್ರೂಪ್ ಪ್ರಧಾನ ಕಾರ್ಯಾಲಯಗಳು ನಿಯಂತ್ರಿಸುತ್ತವೆ. ಶಾಲಾಕಾಲೇಜುಗಳಿಂದ ಆಯ್ದ ಶಿಕ್ಷಕರನ್ನು ಅಸೋಸಿ ಯೇಟ್ ಎನ್‍ಸಿಸಿ ಅಧಿಕಾರಿಗಳಾಗಿ (ಎಎನ್‍ಒ) ನೇಮಿಸುವ ಸಲುವಾಗಿ ತರಬೇತಿ ನೀಡಲು 2 ಅಧಿಕಾರಿಗಳ ತರಬೇತಿ ಸಂಸ್ಥೆಗಳಿವೆ.
ಪ್ರವೇಶ: 7-10 ತರಗತಿಯ 13 ವರ್ಷ ವಯಸ್ಸು ಆದ ಆರೋಗ್ಯವಂತ ಬಾಲಕ ಬಾಲಕಿಯರು ಕಿರಿಯ ವಿಭಾಗಕ್ಕೂ 11 ಅಥವಾ ಮೇಲಿನ ತರಗತಿಯ ವಿದ್ಯಾರ್ಥಿಗಳು ಹಿರಿಯ ವಿಭಾಗಕ್ಕೂ ಸ್ವಇಚ್ಛೆಯಿಂದ ಎನ್‍ಸಿಸಿಗೆ ವಿಧ್ಯುಕ್ತವಾಗಿ ಸೇರಬಹುದು

ಚಟುವಟಿಕೆಗಳು: 1. ಸಾಂಸ್ಥಿಕ ತರಬೇತಿ. ಸೇನಾಪಡೆಗಳ ಜೀವನಕ್ರಮ ಪರಿಚಯಿಸಲು ಹಾಗೂ ಶಿಸ್ತು, ಕರ್ತವ್ಯನಿಷ್ಠೆ, ಸುವ್ಯವಸ್ಥಿತ ಜೀವನ ಮುಂತಾದ ಮೌಲ್ಯಗಳನ್ನು ಬೆಳೆಸಲು ಭೂ, ನೌಕಾ ಮತ್ತು ವಾಯುಸೇನಾ ಸಂಬಂಧಿ ವಿಷಯಗಳಲ್ಲಿ ಪ್ರಾಥಮಿಕ ತರಬೇತಿ ನೀಡುತ್ತದೆ. ಶಿಬಿರ ಜೀವನಾನುಭವ ಒದಗಿಸುತ್ತದೆ; 2. ಸಮುದಾಯ ವಿಕಾಸ. ತಮ್ಮ ದೇಶವಾಸಿಗಳ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಮುದಾಯ ಜೀವನವನ್ನು ಶ್ರೀಮಂತಗೊಳಿಸಲು ಸಮುದಾಯ ವಿಕಾಸ ಕಾರ್ಯಕ್ರಮಗಳು ಹಾಗೂ ಸಮಾಜಸೇವಾ ಚಟುವಟಿಕೆಗಳು. ಉದಾ: ರಕ್ತದಾನ, ವಯಸ್ಕರ ಶಿಕ್ಷಣ, ಏಡ್ಸ್ ಜಾಗೃತಿ; 3. ಯುವ-ವಿನಿಮಯ ಕಾರ್ಯಕ್ರಮ (ವೈಇಪಿ).  ಎನ್‍ಸಿಸಿ ಚಟುವಟಿಕೆಗಳಲ್ಲಿ ಭಾಗವಹಿಸುವ ಸಲುವಾಗಿ ಇತರ ರಾಷ್ಟ್ರಗಳೊಂದಿಗೆ ಆಯ್ದ ಕ್ಯಾಡೆಟ್‍ಗಳ ವಿನಿಮಯ. ಅಂತಾರಾಷ್ಟ್ರೀಯ ಅರಿವು ಮೂಡಿಸುತ್ತದೆ; 4. ಸಾಹಸ ತರಬೇತಿ: ಶಿಲಾರೋಹಣ, ಪರ್ವತಾರೋಹಣ, ಚಾರಣ, ಪ್ಯಾರಾಜಂಪಿಂಗ್, ಸ್ಕ್ಯೂಬಾ ಡೈವಿಂಗ್, ಮೈಕ್ರೊಲೈಟ್ ಫ್ಲೈಯಿಂಗ್ ಮುಂತಾದವು; 5. ಕ್ರೀಡೆ. ಹಾಕಿ, ಫುಟ್‍ಬಾಲ್, ರೈಫಲ್ ಶೂಟಿಂಗ್, ಕುದುರೆ ಸವಾರಿ ಸ್ಪರ್ಧೆಗಳಲ್ಲಿ ಎನ್‍ಸಿಸಿ ತಂಡಗಳು ಭಾಗವಹಿಸುತ್ತವೆ.	
(ಬಿ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ